6ನೇ ಜುಲೈ 2024 ರಂದು ಪ್ರಸನ್ನ ವೀರಾಂಜನೇಯ ಸೇವಾ ಟ್ರಸ್ಟ್ ವತಿಯಿಂದ ೧೦ನೇ ಅಂತಾರಾಷ್ಟೀಯ ದಿನಾಚರಣೆಯ ಅದ್ದೂರಿ ಸಮಾರಂಭ ಆಚರಿಸಲಾಯ್ತು. ಯೋಗ ದೇಶಕಾಲಾತೀತವಾಗಿ ಸರ್ವರಿಗೂ ಸಂಬಂಧಿಸಿದ, ಅನ್ವಯಿಸುವ ಕಲೆ. ಧರ್ಮಾರ್ಥ, ಕಾಮ ಮೋಕ್ಷಾದಿ ಎಲ್ಲ ಸಿದ್ಧಿಗಳಿಗೂ ಮೊದಲು ಶರೀರದ ಆರೋಗ್ಯ ಬಹಳ ಮುಖ್ಯ. ಅಧಿಕಾರ, ಐಶ್ವರ್ಯಾದಿ ಬೇರೆಲ್ಲ ಸಿದ್ಧಿಸಿದ್ದರೂ, ಶರೀರದ ಆರೋಗ್ಯ ಸರಿ ಇಲ್ಲದಿದ್ದರೆ, ಎಲ್ಲವೂ ವ್ಯರ್ಥ. ಹಾಗಾಗಿ ನಮ್ಮ ಸನಾತನ ಭಾರತೀಯ ಸಂಸ್ಕೃತಿಯಲ್ಲಿ ಆರೋಗ್ಯಕ್ಕೆ ಅತಿಶಯವಾದ, ಮಹತ್ವವನ್ನು ನೀಡಿದ್ದು, ದೇಹ ಮತ್ತು ಮನಸ್ಸಿನ, ಆರೋಗ್ಯಕ್ಕೆ ಯೋಗ ಅದೆಷ್ಟು ಮುಖ್ಯ ಎಂಬುದನ್ನು ನಮ್ಮ ಋಷಿಮುನಿಗಳು ಕಂಡುಕೊಂಡಿದ್ದಾರೆ. ಅನೇಕ ಮೊದಲುಗಳಿಗೆ ಕಾರಣವಾದ ನಮ್ಮ ಭಾರತ ದೇಶ, ವಿಶ್ವದ ಎಲ್ಲ ದೇಶಗಳಿಗೂ, ಯೋಗದ ಪ್ರಾಮುಖ್ಯತೆಯನ್ನು ಪರಿಚಯಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂತಹ ಯೋಗ ಕಲಿಕೆಯಲ್ಲಿ, ನಿಸ್ವಾರ್ಥವಾಗಿ ಹಲವು ದಶಕಗಳಿಂದ ತೊಡಗಿಸಿಕೊಂಡು, ಸಾವಿರಾರು ಯೋಗಾರ್ಥಿಗಳಿಗೆ, ಯೋಗವನ್ನು ಕಲಿಸಿಕೊಡುತ್ತಿರುವ ಹಾಗೆಯೇ, ಹತ್ತು ಹಲವು ಸಾಮಾಜಿಕ ಸೇವೆಯನ್ನು ನೀಡುತ್ತಿರುವ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದ ಸಾಧನೆಯು ಶ್ಲಾಘನೀಯವಾದದ್ದು ಎಂದು ನಾಡಿನ ಹೆಸರಾಂತ ವೈದ್ಯರೂ, ವಿಜ್ಞಾನಿ, ವಾಗ್ಮಿ, ಚಿಂತಕರೂ, ಹಾಗೂ ಸಮಾರಂಭದ ಮುಖ್ಯ ಅತಿಥಿಗಳಾಗಿ ಬಂದ ಡಾ. ಕೆ.ಪಿ. ಪುತ್ತೂರಾಯ ಅವರು ಅಭಿಪ್ರಾಯಪಟ್ಟರು. ಯೋಗ ದಿನಾಚರಣೆಯ ಅಂಗವಾಗಿ ಚಿಂತಾಮಣಿಯಲ್ಲಿ ಯೋಗಶಾಲೆಯನ್ನು ನಡೆಸುತ್ತಿರುವ ಶ್ರೀಮತಿ ಜ್ಯೋತಿ ಅವರು ಗ್ರಾಮೀಣ ಪ್ರದೇಶದಲ್ಲಿ ನೀಡುತ್ತಿರುವ ಶ್ಲಾಘನೀಯ ಯೋಗ ಶಿಕ್ಷಣ, ತರಪೇತಿ, ಹಾಗೂ ಒದಗಿಸುತ್ತಿರುವ ಉತ್ತಮ ಸಮುದಾಯ ಚಟುವಟಿಕೆಗಳನ್ನು ಗುರುತಿಸಿ ಅವರಿಗೆ ‘ಶ್ರೀ ಪ್ರಸನ್ನ ವೀರಾಂಜನೇಯ ಯೋಗಶ್ರೀ’ ಪುರಸ್ಕಾರ ಸೇವಾ ದತ್ತಿ ವತಿಯಿಂದ ಪ್ರದಾನಮಾಡಲಾಯಿತು. ಅವರ ಯೋಗ ಶಾಲೆಯ ಮಕ್ಕಳು ಅತ್ಯದ್ಭುತವಾದ ಯೋಗ ಪ್ರದರ್ಶನವನ್ನು ನೀಡಿದ್ದು ಅತ್ಯಂತ ಮನೋಹರವಾಗಿತ್ತು. ಡಾ. ವಿನಯಚಂದ್ರ ಬನವತಿ ಅವರು ಯೋಗ ಕ್ಷೇತ್ರದಲ್ಲಿ ಮಾಡಿರುವ ಅಗಾಧ ಸಾಧನೆ, ಮನೋವಿಜ್ಞಾನ, ತತ್ವಶಾಸ್ತ್ರ, ಸಂಸ್ಕೃತ, ಭಾರತೀಯ ಸಂಸ್ಕೃತಿ ಮತ್ತು ಇತಿಹಾಸ ವಿಷಯಗಳಲ್ಲಿ ಅವರಿಗಿರುವ ಆಳವಾದ ಜ್ಞಾನ, ಈ ಕ್ಷೇತ್ರಗಳಲ್ಲಿ ಅವರು ಮಾಡಿರುವ ಅಧ್ಯಯನ ಮತ್ತು ಸಂಶೋಧನೆ ಅಧ್ಯಾಪನ, ಮತ್ತು ಅವರು ನೀಡಿರುವ ಸಮುದಾಯ ಸೇವೆಗಳನ್ನು ಪರಿಗಣಿಸಿ ಶ್ರೀಯುತರಿಗೆ ‘ಶ್ರೀ ಪ್ರಸನ್ನ ವೀರಾಂಜನೇಯ ಯೋಗಭಾಸ್ಕರ ಪುರಸ್ಕಾರ’ ಪ್ರಶಸ್ತಿಯನ್ನು ನೀಡಲಾಯಿತು. ಶ್ರೀಮತಿ ಗಂಗಮ್ಮ ಕೇಶವಮೂರ್ತಿಯವರದು, ನಾಡಿನ ಗಮಕ ಮತ್ತು ಸಂಗೀತ ಕ್ಷೇತ್ರದಲ್ಲಿ ಅಮೋಘ ಕಾರ್ಯನಿರ್ವಹಿಸಿದವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಹೆಸರು. ಇಂತಹ ಗಣನೀಯರನ್ನು ಇಂದು ಸನ್ಮಾನಿಸುವ ಮೂಲಕ, ಸಂಸ್ಥೆಗೇ ಒಂದು ಘನತೆ ಬಂದಂತೆ ಅನಿಸುತ್ತಿತ್ತು.ಸಂಸ್ಥೆಯ ಯೋಗಪಟುಗಳ ಯೋಗ ಪ್ರದರ್ಶನ, ತದನಂತರ ಸವಿಯಾದ ಊಟದೊಂದಿಗೆ ಸಂಜೆಯ ಸುಂದರವಾದ ಸಮಾರಂಭ ಸಮಾಪ್ತವಾಯಿತು.
Jun 15 – Jul 13, 2024